Friday, 1 August 2014

"ಸಾರ್ವಜನಿಕ ಸಮಾಧಿ ಸ್ಥಳ"


ಮಾನ್ಯ ಮುಖ್ಯ ಮಂತ್ರಿಯವರಿಗೊಂದು ಬಹಿರಂಗ ಪತ್ರ.

ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶವಸಂಸ್ಕಾರ ಸ್ಥಳಗಳನ್ನು ಸರ್ಕಾರವೇ ಒದಗಿಸುತ್ತಿರುವುದು ಮೆಚ್ಚತಕ್ಕದ್ದು.
ಮಾನ್ಯ ಮುಖ್ಯಮಂತ್ರಿಯವರೇ, ತಾವು ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ.
೧. ಆಯಾ ಪಂಗಡಗಳಿಗೆಂದು ನಿಗದಿತ ಸಮಾಧಿ ಸ್ಥಳವನ್ನು  ನೊಂದಾಯಿಸಲ್ಪಟ್ಟ ಸಂಘ ಸಂಸ್ಥೆಗಳಿಗೆ ಕೊಡಲ್ಪಡುತ್ತಿದೆ.  ಹೀಗೆ ಸಂಘ ಸಂಸ್ಥೆಗಳಿಗೆ ಅದನ್ನು ನಿರ್ವಹಿಸುವ ಹಕ್ಕನ್ನು ಕೊಟ್ಟಾಗ ಅವುಗಳಲ್ಲಿ ಅನೇಕ ಪಟ್ಟಭದ್ರ ಹಿತಾಸಕ್ತಿಗಳಾಗಿದ್ದು, ಸಾರ್ವಜನಿಕರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತವೆ. ತಮ್ಮದೇ ಆದ ಶಾಸನಗಳನ್ನು(ಸಂಸ್ಥೆಯ ಬೈಲಾ) ರೂಪಿಸಿ ಅದಕ್ಕೆ ಬದ್ಧರಾಗಿರುವಂತೆ ಸದಸ್ಯರಿಗೆ ತಾಕೀತು ಮಾಡಲಾಗುತ್ತದೆ. ಜೊತೆಗೆ ಸಮಾಧಿಗೆಂದು ಇಂತಿಷ್ಟು ವಂತಿಗೆಯನ್ನು ನಿಗಧಿಪಡಿಸಿ ವಸೂಲು ಮಾಡಲಾಗುತ್ತಿದೆ. ಬಹುಪಾಲು ಸಂಘ ಸಂಸ್ಥೆಗಳಲ್ಲಿರುವ ಆಡಳಿತ ಮಂಡಲಿಯು ಸರ್ಕಾರದಿಂದ ಸಾರ್ವಜನಿಕರಿಗೆ ಮಂಜೂರಾದ ಸಮಾಧಿ ತಮ್ಮದೇ ಸಂಪಾದನೆಯೆಂಬಂತೆ ಜನರನ್ನು ಆಳುವುದು ಎಷ್ಟು ನ್ಯಾಯ?
೨. ಪ್ರತಿಯೊಂದು ಜನಾಂಗಕ್ಕೂ ಪ್ರತ್ಯೇಕ ಸ್ಮಶಾನ ಸ್ಥಳವನ್ನು ನೀಡುತ್ತಾ ಹೋದರೆ ರಾಜ್ಯದ ಗತಿ ಏನಾಗಬಹುದು? ಒಂದೊಂದು ಪಂಗಡಗಳಲ್ಲೂ ಅನೇಕ ಉಪ ಪಂಗಡಗಳಿವೆ.
   ಉದಾ: ಕ್ರೈಸ್ತರಲ್ಲಿ ರಲ್ಲಿ ಅನೇಕ ಉಪಪಂಗಡಗಳಿವೆ, ಒಂದು ಪಂಗಡದ ಸಂಘ ಸಂಸ್ಥೆಗೆ ಸರ್ಕಾರದಿಂದ ಮಂಜೂರಾದ ಸ್ಥಳದಲ್ಲಿ ಇತರೆ ಉಪಪಂಗಡದ ಸದಸ್ಯರು ಮರಣಹೊಂದಿದಾಗ ಶವ ಸಂಸ್ಕಾರಕ್ಕೆ   ನಿರಾಕರಿಸಲಾಗುತ್ತದೆ. ಜನರು ಸಮಸ್ಯೆಯನ್ನು ಅನುಭವಿಸುವಂತಾಗಿದೆ.

ಇದಕ್ಕೆ ಪರಿಹಾರವಾಗಿ ಸಾಮಾಜಿಕ ನ್ಯಾಯವನ್ನು ಬಯಸುವ ಮಾನ್ಯ ಮುಖ್ಯಮಂತ್ರಿಯವರು ಇತ್ತ ಗಮನಹರಿಸಬೇಕೆಂದು ನನ್ನ ಮನವಿ.
೧. "ಸಾರ್ವಜನಿಕ ಸಮಾಧಿ ಸ್ಥಳ" ಗಳನ್ನು  ಏರ್ಪಡಿಸಬೇಕು.
೨. ಯಾವುದೇ ಜನಾಂಗದ ವ್ಯಕ್ತಿ ಮೃತನಾದಲ್ಲಿ ಕರ್ನಾಟಕದಲ್ಲಿ ವಾಸವಿದ್ದನೆಂಬುದಕ್ಕೆ ಪುರಾವೆ ಒದಗಿಸಿ (ಸಂಬಂಧಪಟ್ಟದಾಖಲೆಗಳು) ಆಯಾ ಸ್ಥಳೀಯ ಆಡಳಿತದಲ್ಲಿ ನಿಗದಿತ ಶುಲ್ಕ ನೀಡಿ ಶವ ಸಂಸ್ಕಾರ ಮಾಡಲು ವ್ಯವಸ್ಥೆಯಾಗಬೇಕು.
೩. ಜಾತಿಗೊಂದು, ಪಂಗಡಕೊಂದರಂತೆ ಸಮಾಧಿ ಸ್ಥಳಗಳು ಬೇಡ, ದಿಕ್ಕಿಗೊಂದು ಸಮಾಧಿಯಿದ್ದರೆ ಅದು ನಗರದ ಅಂದವನ್ನೂ ಕೆಡಿಸುತ್ತವೆ. ಎಲ್ಲಾ ಜನಾಂಗಕ್ಕೊ ಒಂದೇ ಸಮಾಧಿಯಿರಲಿ, ಆಗಲಾದರೂ ಈ ಅನಿಷ್ಟ ಜಾತಿ ವ್ಯವಸ್ಥೆ ತೊಲಗಲು ಸಾಧ್ಯ!
೪. ಜಾತಿ ಜಾತಿ ಎಂದು ಎಗರಾಡಿದವರೆಲ್ಲ ಸತ್ತಾಗಲಾದರೂ ಸಮಾಧಾನವಾಗಿ ಒಂದೇ ಕಡೆ ಮಲಗಲಿ!
೫. ಸಾಮಾಜಿಕ ನ್ಯಾಯದ ಹೋರಾಟ ಸಮಾಧಿಯಿಂದಲೇ ಆರಂಭವಾಗಲಿ!

Monday, 14 July 2014

ವ್ಯವಸ್ಥೆಯನ್ನು ಭಕ್ಷಿಸುವವರ ಕೈಗೆ ಸಿಕ್ಕ ನನ್ನ ಕರ್ನಾಟಕದ ಪಾಡೇನು?

ಪ್ರಾಮಾಣಿಕ ಶಾಸಕ ರಮೇಶ್ ಕುಮಾರ್, ಭೇಷ್! ಭೇಷ್!! ಭೇಷ್!!!
ಮಾಜಿ ಮುಖ್ಯ ಮಂತ್ರಿಯ ನಂತರ ಅದೇ ಸಾಲಿಗೆ ಬಂದ ಮತ್ತೊರ್ವ ಶಾಸಕ ರಮೇಶ್ ಕುಮಾರ್ ರವರಿಗೆ
"ತಪ್ಪನ್ನು ರಾಜಾರೋಷವಾಗಿ ಒಪ್ಪ್ಪಿಕೊಳ್ಳುವ  ರಾಜಕಾರಣಿಗಳ ಕ್ಲಬ್ಗೆ ಸ್ವಾಗತ"
ಚುನಾವಣಾ ಆಯೋಗ ವಿಧಾನ ಸಭಾ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆಂದು ನಿಗದಿಪಡಿಸಿರುವ ಮೊತ್ತ ೧೬ ಲಕ್ಷ ಮಾತ್ರ!
(ಇಷ್ಟು ದೊಡ್ಡ ಮೊತ್ತವನ್ನು ಚುನಾವಣೆಗೆ ಖರ್ಚು ಮಾಡಿದ ಮೇಲೆ ಸಂಪಾದಿಸುವ ಸರಿಯಾದ ಮಾರ್ಗವಾದರೂ ಹೇಗೆ ಎಂಬುದರ
ಬಗ್ಗೆ ಚುನಾವಣಾ ಆಯೋಗದ ಬಳಿ ಉತ್ತರವಿರಲಾರದು, ಅದೆಲ್ಲ "ಅಲಿಖಿತ ಉತ್ತರಗಳು" "ಅದರೊಳಗೆ" ಇರುವವರಿಗೆ ಮಾತ್ರ "ಅದು" ಅರ್ಥವಾಗುತ್ತದೆ)
ಆದರೆ ಮಾನ್ಯ ಶಾಸಕ ರಮೇಶ್ ಕುಮಾರ್ ಮೂರೂವರೆ ಕೋಟಿ ಖರ್ಚು ಮಾಡಿದ್ದಾರೆಂದರೆ ಅವರ ಆದಾಯದ ಲೆಕ್ಕಾಚಾರ ಎಷ್ಟಿರಬಹುದು?
ಯಾವ ಯಾವ ಮೂಲದಿಂದ ಇದನ್ನು ಸರಿದೂಗಿಸಬಹುದು? ೬೦ ತಿಂಗಳು ಇವರು ಅಧಿಕಾರದಲ್ಲಿದ್ದರೆ
ಈ ಮೂರುವರೆ ಕೋಟಿಯನ್ನು ಸರಿದೂಗಿಸಲು ಪ್ರತಿ ತಿಂಗಳು ಸುಮಾರು ರೂ. ೫೯೦೦೦ದಷ್ಟು ಹಣವನ್ನು ಉಳಿಸಬೇಕಾಗುತ್ತದೆ.
೬೦ ತಿಂಗಳಲ್ಲಿ ಇವರು ಪಡೆಯುವ ಭತ್ಯೆ ಎಷ್ಟು? ಇವರ ಖರ್ಚು ಎಷ್ಟು?  ಇದನ್ನೆಲ್ಲಾ ಪ್ರಶ್ನಿಸಲು ನನ್ನ ಭವ್ಯ ಭಾರತದಲ್ಲಿ ಯಾವ ವ್ಯವಸ್ಥೆ ಇದೆ?
ರಾಜಾರೋಷವಾಗಿ ಕರ್ನಾಟಕ ಸರ್ಕಾರದ ಆಡಳಿತ ಸದನದಲ್ಲಿ ನಿಂತು ತಾನು ಸದನಕ್ಕೆ ಹಿಂಬಾಗಿಲ ಮುಖಾಂತರ ಆರಿಸಿಬಂದ ಕುರಿತು ಸಮರ್ಥಿಸುತ್ತಿದ್ದರೆ,
ನನ್ನ ಭಾರತದ ಕಾನೂನು ವ್ಯವಸ್ಥೆ ಮೂಕ ಪ್ರೇಕ್ಷಕವಾಗಿ ನೋಡುವಷ್ಟು ಹದಗೆಟ್ಟು ಹೋಗಿದೆಯೇ? ಅಯ್ಯೋ, ಬೇಲಿಯೇ ಪೈರನ್ನು ಮೇಯ್ದಂತೆ,
ಕಾನೂನು ರೂಪಿಸಬೇಕಾದವರೇ ವ್ಯವಸ್ಥೆಯನ್ನು ಅವ್ಯವಸ್ಥೆ ಮಾಡಿದರಲ್ಲಾ? ಇನ್ನು ಅಧಿವೇಶನ ನಡೆಸಿ ಇಂತಹವರು ರೂಪಿಸುವ
ಕಾನೂನು ನನ್ನ  ರಾಜ್ಯವನ್ನು ಸುಭಿಕ್ಷವಾಗಿ, ಸಮಾಧಾನವಾಗಿಡಲು ಸಾಧ್ಯವೇ? ವ್ಯವಸ್ಥೆಯನ್ನು ಭಕ್ಷಿಸುವವರ ಕೈಗೆ ಸಿಕ್ಕ ನನ್ನ ಕರ್ನಾಟಕದ ಪಾಡೇನು?

Sunday, 13 July 2014

ಈ ನಮ್ಮ ಮಾನ್ಯ ಸರ್ಕಾರಕ್ಕೆ ನಿಜವಾಗಲೂ ನಾಗರಿಕರ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ!

ಮೈಸೂರಿನಲ್ಲಿ ಕುಡಿದು ವಾಹನ ಚಾಲನೆ ಮಾಡಿದ 622 ಚಾಲಕರ ಲೈಸೆನ್ಸ್ ರದ್ದು

 ಬೇಷ್ ! ಬೇಷ್ !! ಪೋಲೀಸ್ ಆಯುಕ್ತ ಡಾ. ಎಂ ಸಲೀಂ ರವರೇ,
ಈ ನಿಮ್ಮ ದಿಟ್ಟ ನಿರ್ಧಾರವನ್ನು ನೀವಲ್ಲದೇ ಇನ್ಯಾರೂ ಮಾಡುತ್ತಿರಲಿಲ್ಲ!

ಕುಡಿದು ವಾಹನ ಚಾಲನೆ ಮಾಡುವುದರಿಂದ ಅಪಘಾತವಾಗುತ್ತವೆ ಎಂಬ ವಿಚಾರ ಎಲ್ಲರಿಗೂ(ಕುಡಿದವರಿಗೂ) ತಿಳಿದ ಸಂಗತಿಯೇ.
ಆದರೂ ಮೊಂಡತನವಾಗಿ ವರ್ತಿಸುವವರಿಗೆ ಬುದ್ಧಿಬರುವುದು ಯಾವಾಗ? ಕುಡಿದು ವಾಹನ ಚಾಲನೆ ಮಾಡಿದವರು ಮಾತ್ರ ಸತ್ತರೆ ಪರವಾಗಿಲ್ಲ,
ಇತರೆ ನಾಗರಿಕರನ್ನೂ ಬಲಿ ತೆಗೆದುಕೊಳ್ಳುವುದೇ ದುರಾದೃಷ್ಟ.

ಈ ನಮ್ಮ ಮಾನ್ಯ ಸರ್ಕಾರಕ್ಕೆ ನಿಜವಾಗಲೂ ನಾಗರಿಕರ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ!

ಯಾವುದೋ ಮೂಲೆಯಲ್ಲಿ ನಿಂತು, ಗಾಡಿಗಳನ್ನು ಅಡ್ಡ ಹಾಕಿ, ’ಡ್ರಿಂಕ್ ಅಂಡ್ ಡ್ರೈವ್’  ತಪಾಸಣೆ ಮಾಡುವುದರಿಂದ ಸಂಪೂರ್ಣವಾಗಿ ಈ ಪೀಡೆಯನ್ನು ನೀಗಿಸಲು ಸಾಧ್ಯವಿಲ್ಲ.
’ಕುಡಿದು ವಾಹನ ಚಾಲನೆ ಮಾಡಿದವರ ಲೈಸೆನ್ಸ್ ರದ್ದು ಮಾಡಿದ್ದೇವೆ’ ಎಂಬುದೆಲ್ಲಾ ನಾಗರಿಕರನ್ನು ಮಂಕು ಮಾಡುವ ಅಥವಾ ವಂಚನೆ ಮಾಡುವ ವ್ಯವಸ್ಥಿತ ಹುನ್ನಾರ ಡಾ|| ಸಲೀಂ ರವರೇ,
ಪಾಪ ನೀವೇನ್ ಮಾಡ್ತೀರಾ, ನಿಮ್ಮದೇನಿದ್ದರೂ "ಅಲಿಖಿತ" ಆದೇಶ ಪಾಲಿಸುವುದಲ್ಲವೇ?
ಈ ರೀತಿಯ "ಅಲಿಖಿತ" ಆದೇಶ ಪಾಲಿಸುವ ದುಷ್ಟ ವ್ಯವಸ್ಥೆ ನನ್ನ ಭವ್ಯ ಭಾರತದಲ್ಲಲ್ಲದೇ ಬೇರೆಲ್ಲೂ ಇರಲು ಸಾಧ್ಯವಿಲ್ಲ ಬಿಡಿ!

ನಿಜವಾಗಲೂ ಮಾನ್ಯ ಸರ್ಕಾರಕ್ಕೆ ನಾಗರಿಕರ ಕುರಿತು ಕಾಳಜಿಯಿದ್ದರೆ, ಆರೋಗ್ಯಕರವಾದ ಸಮಾಜ ನಿರ್ಮಾಣ ಮಾಡಬೇಕೆನ್ನುವ ಧ್ಯೇಯವಿದ್ದರೆ, ತಾಕತಿದ್ದರೆ,
ಬಾರ್ ಗಳ ದ್ವಾರಗಳಲ್ಲಿ , ಆ ರಸ್ತೆಗಳಲ್ಲಿ (ಅರ್ಧ ಕಿ.ಮೀ ಸುತ್ತಳತೆಯ ಎಲ್ಲಾ ರಸ್ತೆಗಳಲ್ಲಿ ) ತಪಾಸಣೆಗಾಗಿ ಪೋಲೀಸ್ ತಂಡಗಳನ್ನು ನಿಲ್ಲಿಸಲು ಸಾಧ್ಯವೇ?
ಪೋಲೀಸ್ ಇಲಾಖೆಯ ಪ್ರಕಟನೆಯ ಪ್ರಕಾರ ಕೇವಲ 622 ಮಂದಿ ಚಾಲಕರು ಮಾತ್ರ ಕುಡಿದಿದ್ದರೆ ನಗರದಲ್ಲಿ
ಇಷ್ಟೊಂದು ಪ್ರಮಾಣದ ಬಾರ್ ಗಳು ವ್ಯವಹಾರ ನಡೆಸಲು ಸಾಧ್ಯವಾಗುತ್ತಿರಲಿಲ್ಲ!!! ನಿಮ್ಮ ತಪಾಸಣೆ, ಪ್ರಕಟಣೆಗಳೆಲ್ಲವೂ ವಾಸ್ತವಿಕತೆಗೆ ತಾಳೆಯಾಗುವುದಿಲ್ಲ, ಅದು ಕೇವಲ ಕಣ್ಣೊರೆಸುವ ತಂತ್ರವಷ್ಟೇ!

Wednesday, 9 July 2014

ಧರ್ಮದೇಟು ಕಾನೂನು ಬದ್ಧವೇ?
ಯಾವುದೇ ಸಂಘ ಸಂಸ್ಥೆ ಅಥವಾ ಸಂಘಟನೆ - ಸಂಘ ಸಂಸ್ಥೆಗಳ ನೊಂದಾಣಾಧಿಕಾರಿಗಳಲ್ಲಿ ನೊಂದಾಯಿಸಿಕೊಂಡ ಮಾತ್ರಕ್ಕೆ ಆ ಸಂಘ ಅಥವಾ ಸಂಘಟನೆ ಸದಸ್ಯರು ಗುಂಪಾಗಿ ಹೋಗಿ  ಸಮಾಜ ವಿರೋಧಿ ವ್ಯಕ್ತಿಗಳನ್ನು ಬಹಿರಂಗವಾಗಿ(ರಾಜಾರೋಷವಾಗಿ ಮಾಧ್ಯವದವರ ಎದುರು ವಿಡಿಯೋ ಚಿತ್ರಿಕರಿಸುತ್ತಾ)  ಥಳಿಸುವುದಕ್ಕೆ ಅಥವಾ ನಿಂದಿಸುವುದಕ್ಕೆ ಹಕ್ಕು ಪಡೆದವರಾಗಿರುತ್ತಾರೆಯೇ? ಈ ಘಟನೆಗಳನ್ನು ಸರ್ಕಾರ ಅನುಮೋದಿಸುತ್ತದೆಯೇ? ಕೊರಳಿಗೆ ಯಾವುದಾದರೂ ಸಂಘಟನೆ ಗುರುತಿನ ಚೀಟಿ ಅಥವಾ ಸ್ಟೋಲ್ ಧರಿಸಿದ್ದರೆ ಅವರು ಸರ್ವ ಸಾಚಾಗಳೇ? ಆ ರೀತಿಯ ಸಂಘಟನೆಯನ್ನು ಯಾರೂ(ಸರ್ಕಾರ ಕೂಡ ಎದುರು ಹಾಕಿಕೊಳ್ಳಬಾರದೇ? ಈ ರೀತಿಯ ಘನಕಾರ್ಯಗಳು ಈ ನನ್ನ ಭವ್ಯಭಾರತದಲ್ಲಲ್ಲದೆ ಇನ್ಯಾವ ದೇಶದಲ್ಲಿ ನಡೆದೀತು? ಹೀಗಾದರೂ ಹೆಮ್ಮೆಪಡಬಹುದೆಂದು ನಮ್ಮ ಘನ ಸರ್ಕಾರಗಳು ಮಾಧ್ಯಮಗಳಲ್ಲಿ ಸಾಕ್ಷಿ ಸಮೇತ ಬಿತ್ತರಿಸಲ್ಪಟ್ಟರೂ ಕಣ್ಮುಚ್ಚಿ ಕುಳಿತಿದೆ ಅನ್ನಿಸುತ್ತಿದೆ! ಸಮಾಜ ವಿರೋಧಿ ಕಾರ್ಯ ಮಾಡಿದ ಪಾತಕಿಗಳನ್ನು ಫೋಟೋ ಇಲ್ಲದಿದ್ದರೂ ಆತನ ಚಹರೆ ಹೇಗಿತ್ತು ಎಂದು ಮಾತುಗಳಲ್ಲಿ ಕೇಳಿ ಅದಕ್ಕೆ ನಾನಾ ಬಗೆಯಭಂಗಿಯ ರೂಪ ಕೊಟ್ಟು, ಪಾತಕಿ ತಪ್ಪಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣಮಾಡಿ ಪಾತಕಿಯನ್ನು ಖೆಡ್ಡಕ್ಕೆ ಬೀಳಿಸುವ ಪೋಲೀಸ್ ಇಲಾಖೆಯ ಚಾಕಚಕ್ಯತೆ ಮೆಚ್ಚುವಂತದ್ದು ಆದರೆ ವಿಪರ್ಯಾಸವೆಂದರೆ, ಕಣ್ಣ ಮುಂದೆಯೇ ರಾಜಾರೋಷವಾಗಿ ಧರ್ಮದೇಟು ಸಂಸ್ಕೃತಿಯಲ್ಲಿ ತೊಡಗಿಸಿಕೊಂಡವರ ಮೇಲೆ ಯಾವುದೇ ಶಿಸ್ತು ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುವುದು ಯಾಕೆ?

ಈ ಧರ್ಮದೇಟು ಸಂಸ್ಕೃತಿ ಹೀಗೆ ಮುಂದುವರಿದರೆ ಮುಂದೊಂದು ದಿನ
          ಭ್ರಷ್ಟಾಚಾರಿ ಪೋಲೀಸ್ ಅಧಿಕಾರಿಗಳಿಗೆ ಹೀಗೆ ಬಹಿರಂಗವಾಗಿ ಧರ್ಮದೇಟುಬಿದ್ದರೆ...?
          ಭ್ರಷ್ಟಾಚಾರಿ ತಹಸೀಲ್ದಾರ್ ಗೆ ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
          ಭ್ರಷ್ಟಾಚಾರಿ ಜಿಲ್ಲಾದಿಕಾರಿಗೆ ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
          ಭ್ರಷ್ಟಾಚಾರಿ ಜನಪ್ರತಿನಿಧಿಗಳಿಗೆ ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
          ಭ್ರಷ್ಟಾಚಾರಿ ಗೃಹ ಸಚಿವನಿಗೆ ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
          ಭ್ರಷ್ಟಾಚಾರಿ ಪೋಲೀಸ್ ಅಧಿಕಾರಿಗಳಿಗೆ ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
          ಭ್ರಷ್ಟಾಚಾರಿ ಸಂಸದನಿಗೆ ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
          ಅಷ್ಟೇ ಯಾಕೆ ಭ್ರಷ್ಟಾಚಾರಿ ಮುಖ್ಯಮಂತ್ರಿಗೆ ಹೀಗೆ ಬಹಿರಂಗವಾಗಿ ಧರ್ಮದೇಟು ಬಿದ್ದರೆ...?
ಹೀಗೆ ಮುಂದುವರಿದರೆ ಕಾನೂನು ಸುವ್ಯವಸ್ಥೆಗೆ ಕೋಟಿಗಟ್ಟಲೆ ಸರಕಾರ ವ್ಯಯಮಾಡುವ ಅದಕ್ಕಾಗಿ ಚಿಂತಿಸುವ ಪ್ರಮೇಯವೇ ಇರುವುದಿಲ್ಲ...!?
ಈಗಲಾದರೂ ಎಚ್ಚತ್ತುಕೊಳ್ಳಿ ಮಾನ್ಯ ಮುಖ್ಯಮಂತ್ರಿಯವರೇ, ಇಲಾಖಾ ಸಚಿವರೇ, ಅಧಿಕಾರಿಗಳೇ...ಸೊಗಸಾದ... ಶಿಸ್ತಾದ... ಶಾಂತಿಯುತ... ಆರೋಗ್ಯಕರ ಸಮಾಜ ಸ್ಥಾಪಿಸಲು ಪಣತೊಡಿ.....

ತಡ ಮಾಡಿದರೆ ನಿಮ್ಮ ಹಣೆಬರಹ.. ಯಾರಿಂದ ತಪ್ಪಿಸಲು ಸಾಧ್ಯ..?