Friday 1 August 2014

"ಸಾರ್ವಜನಿಕ ಸಮಾಧಿ ಸ್ಥಳ"


ಮಾನ್ಯ ಮುಖ್ಯ ಮಂತ್ರಿಯವರಿಗೊಂದು ಬಹಿರಂಗ ಪತ್ರ.

ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶವಸಂಸ್ಕಾರ ಸ್ಥಳಗಳನ್ನು ಸರ್ಕಾರವೇ ಒದಗಿಸುತ್ತಿರುವುದು ಮೆಚ್ಚತಕ್ಕದ್ದು.
ಮಾನ್ಯ ಮುಖ್ಯಮಂತ್ರಿಯವರೇ, ತಾವು ಇಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ.
೧. ಆಯಾ ಪಂಗಡಗಳಿಗೆಂದು ನಿಗದಿತ ಸಮಾಧಿ ಸ್ಥಳವನ್ನು  ನೊಂದಾಯಿಸಲ್ಪಟ್ಟ ಸಂಘ ಸಂಸ್ಥೆಗಳಿಗೆ ಕೊಡಲ್ಪಡುತ್ತಿದೆ.  ಹೀಗೆ ಸಂಘ ಸಂಸ್ಥೆಗಳಿಗೆ ಅದನ್ನು ನಿರ್ವಹಿಸುವ ಹಕ್ಕನ್ನು ಕೊಟ್ಟಾಗ ಅವುಗಳಲ್ಲಿ ಅನೇಕ ಪಟ್ಟಭದ್ರ ಹಿತಾಸಕ್ತಿಗಳಾಗಿದ್ದು, ಸಾರ್ವಜನಿಕರನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತವೆ. ತಮ್ಮದೇ ಆದ ಶಾಸನಗಳನ್ನು(ಸಂಸ್ಥೆಯ ಬೈಲಾ) ರೂಪಿಸಿ ಅದಕ್ಕೆ ಬದ್ಧರಾಗಿರುವಂತೆ ಸದಸ್ಯರಿಗೆ ತಾಕೀತು ಮಾಡಲಾಗುತ್ತದೆ. ಜೊತೆಗೆ ಸಮಾಧಿಗೆಂದು ಇಂತಿಷ್ಟು ವಂತಿಗೆಯನ್ನು ನಿಗಧಿಪಡಿಸಿ ವಸೂಲು ಮಾಡಲಾಗುತ್ತಿದೆ. ಬಹುಪಾಲು ಸಂಘ ಸಂಸ್ಥೆಗಳಲ್ಲಿರುವ ಆಡಳಿತ ಮಂಡಲಿಯು ಸರ್ಕಾರದಿಂದ ಸಾರ್ವಜನಿಕರಿಗೆ ಮಂಜೂರಾದ ಸಮಾಧಿ ತಮ್ಮದೇ ಸಂಪಾದನೆಯೆಂಬಂತೆ ಜನರನ್ನು ಆಳುವುದು ಎಷ್ಟು ನ್ಯಾಯ?
೨. ಪ್ರತಿಯೊಂದು ಜನಾಂಗಕ್ಕೂ ಪ್ರತ್ಯೇಕ ಸ್ಮಶಾನ ಸ್ಥಳವನ್ನು ನೀಡುತ್ತಾ ಹೋದರೆ ರಾಜ್ಯದ ಗತಿ ಏನಾಗಬಹುದು? ಒಂದೊಂದು ಪಂಗಡಗಳಲ್ಲೂ ಅನೇಕ ಉಪ ಪಂಗಡಗಳಿವೆ.
   ಉದಾ: ಕ್ರೈಸ್ತರಲ್ಲಿ ರಲ್ಲಿ ಅನೇಕ ಉಪಪಂಗಡಗಳಿವೆ, ಒಂದು ಪಂಗಡದ ಸಂಘ ಸಂಸ್ಥೆಗೆ ಸರ್ಕಾರದಿಂದ ಮಂಜೂರಾದ ಸ್ಥಳದಲ್ಲಿ ಇತರೆ ಉಪಪಂಗಡದ ಸದಸ್ಯರು ಮರಣಹೊಂದಿದಾಗ ಶವ ಸಂಸ್ಕಾರಕ್ಕೆ   ನಿರಾಕರಿಸಲಾಗುತ್ತದೆ. ಜನರು ಸಮಸ್ಯೆಯನ್ನು ಅನುಭವಿಸುವಂತಾಗಿದೆ.

ಇದಕ್ಕೆ ಪರಿಹಾರವಾಗಿ ಸಾಮಾಜಿಕ ನ್ಯಾಯವನ್ನು ಬಯಸುವ ಮಾನ್ಯ ಮುಖ್ಯಮಂತ್ರಿಯವರು ಇತ್ತ ಗಮನಹರಿಸಬೇಕೆಂದು ನನ್ನ ಮನವಿ.
೧. "ಸಾರ್ವಜನಿಕ ಸಮಾಧಿ ಸ್ಥಳ" ಗಳನ್ನು  ಏರ್ಪಡಿಸಬೇಕು.
೨. ಯಾವುದೇ ಜನಾಂಗದ ವ್ಯಕ್ತಿ ಮೃತನಾದಲ್ಲಿ ಕರ್ನಾಟಕದಲ್ಲಿ ವಾಸವಿದ್ದನೆಂಬುದಕ್ಕೆ ಪುರಾವೆ ಒದಗಿಸಿ (ಸಂಬಂಧಪಟ್ಟದಾಖಲೆಗಳು) ಆಯಾ ಸ್ಥಳೀಯ ಆಡಳಿತದಲ್ಲಿ ನಿಗದಿತ ಶುಲ್ಕ ನೀಡಿ ಶವ ಸಂಸ್ಕಾರ ಮಾಡಲು ವ್ಯವಸ್ಥೆಯಾಗಬೇಕು.
೩. ಜಾತಿಗೊಂದು, ಪಂಗಡಕೊಂದರಂತೆ ಸಮಾಧಿ ಸ್ಥಳಗಳು ಬೇಡ, ದಿಕ್ಕಿಗೊಂದು ಸಮಾಧಿಯಿದ್ದರೆ ಅದು ನಗರದ ಅಂದವನ್ನೂ ಕೆಡಿಸುತ್ತವೆ. ಎಲ್ಲಾ ಜನಾಂಗಕ್ಕೊ ಒಂದೇ ಸಮಾಧಿಯಿರಲಿ, ಆಗಲಾದರೂ ಈ ಅನಿಷ್ಟ ಜಾತಿ ವ್ಯವಸ್ಥೆ ತೊಲಗಲು ಸಾಧ್ಯ!
೪. ಜಾತಿ ಜಾತಿ ಎಂದು ಎಗರಾಡಿದವರೆಲ್ಲ ಸತ್ತಾಗಲಾದರೂ ಸಮಾಧಾನವಾಗಿ ಒಂದೇ ಕಡೆ ಮಲಗಲಿ!
೫. ಸಾಮಾಜಿಕ ನ್ಯಾಯದ ಹೋರಾಟ ಸಮಾಧಿಯಿಂದಲೇ ಆರಂಭವಾಗಲಿ!

No comments:

Post a Comment